ಆಧ್ಯಾತ್ಮಿಕ ಬೆಳವಣಿಗೆಗಾಗಿ (#9481)

ನನ್ನಲ್ಲಿ ಒಂದು ಪವಿತ್ರ ಹೃದಯವನ್ನು ಸೃಷ್ಟಿಸು, ಓ ನನ್ನ ದೇವರೇ, ಹಾಗೂ ಪ್ರಶಾಂತವಾದ ಒಂದು ಅಂತಃಶ್ಚೇತನವನ್ನು ನವೀಕರಿಸು, ಓ ನನ್ನ ಭರವಸೆಯೇ! ಚೈತನ್ಯಶಕ್ತಿಯ ಮೂಲಕ ನಿನ್ನ ಧರ್ಮದಲ್ಲಿ ನನ್ನನ್ನು ದೃಢಪಡಿಸು, ಓ ನನ್ನ ಪರಮ ಪ್ರಿಯತಮನೇ! ಹಾಗೂ ನಿನ್ನ ವೈಭವದ ಬೆಳಕಿನಿಂದ ನಿನ್ನ ಪಥವನ್ನು ನನಗೆ ಪ್ರಕಟಿಸು, ಓ ನನ್ನ ಆಸೆಯ ಗುರಿಯೇ! ನಿನ್ನ ಸರ್ವಾತಿಶಯ ಶಕ್ತಿಯ ಮೂಲಕ ನಿನ್ನ ಪವಿತ್ರತೆಯ ಸ್ವರ್ಗಕ್ಕೆ ನನ್ನನ್ನು ಮೇಲೆತ್ತು.  ಓ ನನ್ನ ಆಸ್ತಿತ್ವದ ಮೂಲನೇ ಹಾಗೂ ನಿನ್ನ ಚಿರಂತನತೆಯ ತಂಗಾಳಿಯಿಂದ ನನ್ನನ್ನು ಸಂತೋಷಪಡಿಸು.  ಓ ನನ್ನ ದೇವರೇ!  ನಿನ್ನ ಅಮರ ಶ್ರುತಿಗಳು ನನ್ನ ಮೇಲೆ ಪ್ರಶಾಂತತೆಯನ್ನುಂಟುಮಾಡಲಿ, ಓ ನನ್ನ ಒಡನಾಡಿಯೇ ಹಾಗೂ ನಿನ್ನ ಪುರಾತನ ದರ್ಶನದ ಸಿರಿಯಿಂದ ನಿನ್ನ ಹೊರತು ಮತ್ತೆಲ್ಲದರಿಂದ ನನ್ನನ್ನು ಮುಕ್ತಿಗೊಳಿಸು.  ಓ ನನ್ನ ಒಡೆಯನೇ, ನಿನ್ನ ಶುದ್ಧವಾದ ಸಾರಸತ್ವದ ಪ್ರಕಟನೆಯ ಸುವಾರ್ತೆಗಳು ನನಗೆ ಆನಂದವನ್ನು ತಂದೀಯಲಿ.  ವ್ಯಕ್ತರಲ್ಲಿ ಸರ್ವಾಧಿಕ ವ್ಯಕ್ತನೂ ಹಾಗೂ ಗುಪ್ತರಲ್ಲಿ ಅತ್ಯಂತ ಗುಪ್ತನೂ ನೀನಾಗಿರುವೆ.   –

-Bahá'u'lláh
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9482)

ನನ್ನ ದೇವರೇ, ನನ್ನ ಆರಾಧ್ಯನೇ, ನನ್ನ ದೊರೆಯೇ, ನನ್ನ ಆಕಾಂಕ್ಷೆಯೇ! ಯಾವ ನಾಲಿಗೆ ತನ್ನ ಕೃತಜ್ಞತೆಗಳನ್ನು ನಿನಗೆ ಅರ್ಪಿಸಬಲ್ಲದಾಗಿದೆ? ನಾನು ಅಲಕ್ಷ್ಯನಾಗಿದ್ದೆ ನೀನು ನನ್ನನ್ನು ಎಚ್ಚರಗೊಳಿಸಿದ್ದೀಯೇ ನಾನು ನಿನ್ನಿಂದ ವಿಮುಖನಾಗಿದ್ದೆ, ನಾನು ನಿನ್ನತ್ತ ತಿರುಗುವಂತೆ ನೀನು ನನಗೆ ಉದಾರವಾಗಿ ಸಹಕರಿಸಿದ್ದೀಯೇ.   ನಾನೊಬ್ಬ ನಿರ್ಜೀವಿಯಂತಿದ್ದೆ ನೀನು ಜೀವಜಲದಿಂದ ನನ್ನಲ್ಲಿ ಜೀವ ತುಂಬಿದ್ದೀಯೇ.  ನಾನು ಬಾಡಿ ಹೋಗಿದ್ದೆ, ಸರ್ವ ಕೃಪಾಳುವಿನ ಲೇಖನಿಯಿಂದ ಹರಿದು ಬಂದಿರುವ ನಿನ್ನ ವಾಣಿಯ ಸ್ವರ್ಗೀಯ ಝರಿಯಿಂದ ನೀನು ನನ್ನನ್ನು ಪುನರುಜ್ಜೀವಿತಗೊಳೀಸಿದ್ದೀಯೇ.
ಓ ದಿವ್ಯಾನುಗ್ರಹವೇ! ಸಕಲ ಸೃಷ್ಟಿಯೂ ನಿನ್ನ ಉದಾರತೆಯಿಂದ ಉತ್ಪನ್ನವಾಗಿರುವುದು!  ನಿನ್ನ ಔದಾರ್ಯದ ಜಲದಿಂದ ಅದನ್ನು ವಂಚಿತವನ್ನಾಗಿಸಬೇಡ, ಅಷ್ಟು ಮಾತ್ರವಲ್ಲ, ನಿನ್ನ ಕರುಣಾ ಸಾಗರದಿಂದ ಅದನ್ನು ತಡೆಹಿಡಿಯಲೂ ಬೇಡ.  ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಸ್ಥಿತಿಗಳಲ್ಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನಿನ್ನ ದೈವೀ ಉದಾರತೆಯ ಸ್ವರ್ಗದಿಂದ ನಿನ್ನ ಪುರಾತನ ಅನುಗ್ರಹವನ್ನು ಕೋರುವಂತೆ ನಾನು ನಿನ್ನಲ್ಲಿ ಮೊರೆಯಿಡುತ್ತೇನೆ.  ನೀನು, ಸತ್ಯವಾಗಿಯೂ, ಔದಾರ್ಯದ ಪ್ರಭು ಹಾಗೂ ಚಿರಂತನ ಸಾಮ್ರಾಜ್ಯದ ಸಾರ್ವಭೌಮನಾಗಿರುವೆ.

-Bahá'u'lláh
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9488)

ಓ ನನ್ನ ಪ್ರಭುವೇ! ನಿನ್ನ ಸೌಂದರ್ಯವನ್ನು ನನ್ನ ಆಹಾರವನ್ನಾಗಿಯೂ, ನಿನ್ನ ಸಾನ್ನಿಧ್ಯವನ್ನು ನನ್ನ ಪಾನೀಯವನ್ನಾಗಿಯೂ, ನಿನ್ನ ಗುಣಾಗಾನವನ್ನು ನನ್ನ ಕೃತಿಯನ್ನಾಗಿಯೂ, ನಿನ್ನ ಸ್ಮರಣೆಯನ್ನು ನನ್ನ ಸಂಗಾತಿಯನ್ನಾಗಿಯೂ, ನಿನ್ನ ಸಾಮ್ರಾಜ್ಯದ ಶಕ್ತಿಯನ್ನು ನನ್ನ ನೆರವನ್ನಾಗಿಯೂ, ನಿನ್ನ ವಾಸಸ್ಥಳವನ್ನು ನನ್ನ ಮನೆಯನ್ನಾಗಿಯೂ ಹಾಗೂ ನನ್ನ ವಾಸಸ್ಥಳವನ್ನು ನಿನ್ನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನಿರ್ಬಂಧಗಳಿಂದ ಶುದ್ಧೀಕರಿಸಿದ ಪೀಠವನ್ನಾಗಿಯೂ ಮಾಡು.  ನೀನು ನಿಜವಾಗಿಯೂ ಸರ್ವಶಕ್ತ, ಮಹಿಮಾನ್ವಿತ, ಅತಿ ಪರಾಕ್ರಮಶಾಲಿಯಾಗಿರುವೆ.

-Bahá'u'lláh
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9483)

ಹೇಳು: ಓ ದೇವರೇ, ನನ್ನ ದೇವರೇ, ನನ್ನ ಶಿರಸ್ಸನ್ನು ನ್ಯಾಯದ ಕಿರೀಟದಿಂದ ಅಲಂಕರಿಸು.  ಸರ್ವ ಸಮತೆಯ ಭೂಷಣದಿಂದ ನನ್ನ ಹೃದಯ ದೇಗುಲವನ್ನು ಸಿಂಗರಿಸು.  ಸತ್ಯವಾಗಿಯೂ, ನೀನೇ ಎಲ್ಲ ಕಾಣಿಕೆಗಳ ಮತ್ತು ಔದಾರ್ಯಗಳ ಒಡೆಯನಾಗಿದ್ದೀಯೇ.
ಓ ಪರಮಾತ್ಮ, ನವಚೇತನವನ್ನುಂಟುಮಾಡು ನನ್ನ ಆತ್ಮವನ್ನು ಸಂತಸಗೊಳಿಸು, ಹೃದಯವನ್ನು ಪರಿಶುದ್ಧವಾಗಿಸು.  ನನ್ನ ಅಂತಃಶಕ್ತಿಯನ್ನು ಉಜ್ವಲಿಸು.  ನನ್ನ ಸಮಸ್ತ ವಿಚಾರಗಳನ್ನು ನಿನ್ನ ಕೈಯಲ್ಲಿರಿಸಿರುವೆ.  ನೀನೇ ನನ್ನ ಮಾರ್ಗದರ್ಶಕ, ಆಶ್ರಯದಾತ, ಇನ್ನೆಂದಿಗೂ ನಾನು ದುಃಖಿಸುವುದಿಲ್ಲ.  ಸಂಕಟಪಡುವುದಿಲ್ಲ ನಾನೊಬ್ಬ ಸುಖಿ ಹಾಗೂ ಆನಂದಮಯ ಜೀವಿ.  ಓ ದೇವರೇ, ಇನ್ನು ನನಗೆ ಕಳವಳದ ಭಾರವಿಲ್ಲ.  ಅದಾವ ತೊಂದರೆಯೂ ಪೀಡಿಸದು ಜೀವಿತದ ಯಾವ ಅಹಿತ ವಿಚಾರವನ್ನೂ ಯೋಚಿಸದಿರುವೆ.
ಕರುಣಾಶಾಲಿಯೇ, ನಾನು ನನಗೆಷ್ಟು ಸಖನಾಗಿರುವೆನೋ, ಅದಕ್ಕಿಂತಲೂ ಅತಿಶಯವಾಗಿ ನೀನು ನನಗೆ ಸಖನಾಗಿರುವೆ ಪ್ರಭುವೇ, ನಾನು ನಿನಗೆ ಅನನ್ಯ ಶರಣಾಗಿಬಿಟ್ಟಿದ್ದೇನೆ.

-`Abdu'l-Bahá
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9484)

ಓ ಪರಮಾತ್ಮ, ನಾವು ದುರ್ಬಲರು ನಮ್ಮನ್ನು ಶಕ್ತರನ್ನಾಗಿ ಮಾಡು.  ಓ ದೇವರೇ, ನಾವು ಅಜ್ಞಾನಿಗಳು, ಜ್ಞಾನಿಗಳನ್ನಾಗಿ ಮಾಡು.  ಓ ದೇವರೇ ನಾವು ಬಡವರು, ಸಿರಿವಂತರನ್ನಾಗಿ ಮಾಡು.  ನಾವು ಸತ್ತವರು, ಮುಕ್ತಿಗೊಳಿಸು.  ಓ ಪ್ರಭುವೇ, ನಾವು ಕುಗ್ಗಿಬಿಟ್ಟಿದ್ದೇವೆ.  ನಿನ್ನ ಸಾಮ್ರಾಜ್ಯದಲ್ಲಿ ಶ್ರೇಷ್ಠರನ್ನಾಗಿ ಮಾಡು.  ಪ್ರಭುವೇ, ನೀನು ನಮಗೆ ಸಹಾಯವೆಸಗಿದರೆ ಮಿನುಗು ನಕ್ಷತ್ರಗಳಂತಾದೇವು ಸಹಾಯವೆಸಗದಿದ್ದರೆ ಭೂಮಿಗಿಂತಲೂ ಕೀಳಾದೇವು.  ಪರಮಾತ್ಮ, ನಮ್ಮನ್ನು ಶಕ್ತಗೊಳಿಸು, ಯಶಸ್ಸನ್ನು ಅನುಗ್ರಹಿಸು.  ಅಹಂಕಾರವನ್ನು ಗೆಲ್ಲುವಂತೆ ಮಾಡು. ಆಶೆಯಿಂದ ಪಾರುಗಾಣಿಸು. ಇಹ ಪ್ರಪಂಚದ ಬಂಧನದಿಂಡ ಮುಕ್ತರನ್ನಾಗಿ ಮಾಡು.  ದೇವರೇ, ನಿನನ್ನು ಸೇವಿಸಲು, ಪೂಜಿಸತೊಡಗಲು ನಿನ್ನ ಸಾಮ್ರಾಜ್ಯದಲ್ಲಿ ಶ್ರದ್ಧಾಸಕ್ತಿಯಿಂದ ಶ್ರಮಿಸಲು ಅನುಕೂಲಿಸುವಂತೆ ನಿನ್ನ ಪವಿತ್ರಾತ್ಮದ ಮೂಲಕ ಉದ್ಯುಕ್ತಗೊಳಿಸುವವನಾಗು ಪ್ರಭುವೇ, ನೀನು ಶಕ್ತಿಯ ಅಧಿದೇವತೆ, ಕ್ಷಮಾದಾತ, ಕರುಣಾಶಾಲಿ.

-`Abdu'l-Bahá
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9485)

ನನ್ನ ಪರಮಾತ್ಮ, ಓ ನನ್ನ ಪರಮಾತ್ಮ, ನೀನೇ ನನ್ನ ಆಶಾದೀವಿಗೆ, ಪ್ರೇಮಿ, ನನ್ನ ಗುರಿ, ಇಚ್ಛಾಪೂರೈಕೆಯ ಮೂರ್ತಿ.  ಅತಿ ನಮ್ರತೆಯಿಂದ, ಪೂರ್ಣತನ್ಮಯ ಭಾವದಿಂದ ಪ್ರಾರ್ಥಿಸುವುದಿಷ್ಟೆ - ನಿನ್ನ ಆಸರೆಯ ಜಗತ್ತಿನಲ್ಲಿ ನನ್ನನ್ನು ಪ್ರೇಮದ ಶಿಖರವನ್ನಾಗಿ ನಿರ್ಮಿಸು.  ನಿನ್ನ ಸೃಷ್ಟಿಯ ಜೀವಿಗಳಲ್ಲಿ ನನ್ನನ್ನು ನಿನ್ನ ಜ್ಞಾನದೀವಿಗೆಯಂತೆ ಮಾಡು.  ನಿನ್ನ ಕೃಪೆಯ ಧ್ವಜವನ್ನಾಗಿ  ಏರಿಸು.  ನಿನ್ನ ಹೊರತು ಮತ್ತೆಲ್ಲ ವಸ್ತುಗಳಿಂದಲೂ ದೂರವಿರುವ, ಈ ಪ್ರಪಂಚದ ಎಲ್ಲ ವಸ್ತುಗಳಿಂದಲೂ ಅತೀತರಾಗಿ ಪವಿತ್ರವಾಗಿರುವ ಹಾಗೂ ಶಂಕೆಗೊಳಪಟ್ಟವರ ದೋಷದಿಂದ ಹೊರತಾಗುಳ್ಳ ನಿನ್ನ ಭಕ್ತರಲ್ಲಿ ನನ್ನನ್ನು ಒಬ್ಬನನ್ನಾಗಿ ಸೇರಿಸಿಕೋ.  ನಿನ್ನ ಜಗತ್ತಿನ ಭಾವನಾತ್ಮಕ ಹೆಗ್ಗಳಿಕೆಯ ಮೂಲಕ ಹೃದಯ ಹಿರಿಹಿಗ್ಗಲಿ.  ನಿನ್ನ ಸರ್ವಾಂತರ್ಯಾಮಿತ್ವದಿಂಡ ಒಂದರ ಮೇಲೊಂದರಂತೆ ಎರಗುವ ಯಶಸ್ಸಿನ ತರಂಗಗಳನ್ನು ಕಾಣುವಂತೆ ನನ್ನ ದೃಷ್ಟಿಯನ್ನು ಬೆಳಗಿಸು.  ನೀನು ಸರ್ವಸಮರ್ಥ, ಪ್ರಬಲ, ಅಜೇಯ

-`Abdu'l-Bahá
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9486)

ಓ ನನ್ನ ಪ್ರಭುವೇ, ಪ್ರಿಯತಮನೇ, ಇಚ್ಛಾಪೂರೈಕೆಯ ಸಾಕಾರ ಮೂರ್ತಿಯೇ, ನಾನು ಒಬ್ಬಂಟಿಗ, ಈ ದಿಶೆಯಲ್ಲಿ ನನ್ನ ಮಿತ್ರನಾಗು.  ನನ್ನ ದೇಶಭ್ರಷ್ಟ ಜೀವಿತದಲ್ಲಿ ನನ್ನೊಡನಿರು, ನನ್ನ ದುಃಖವನ್ನು ನಿವಾರಿಸು.  ನಿನ್ನ ಸುಂದರ ಸ್ವರೂಪಕ್ಕೆ ಮಣಿಯುವಂತೆ ಮಾಡು.  ನಿನ್ನ ಹೊರತಾಗಿ ಮಿಕ್ಕೆಲವುಗಳಿಂದಲೂ ನನ್ನನ್ನು ದೂರಮಾಡು.  ನಿನ್ನ ಪವಿತ್ರ ಸುವಾಸನೆಯಿಂದ ನನ್ನನ್ನು ಆಕರ್ಷಿಸು.  ನಿನ್ನ ಸಾಮ್ರಾಜ್ಯದಲ್ಲಿ ನಿನ್ನನ್ನು ಬಿಟ್ಟು ಬೇರೆಲ್ಲವನ್ನು ಉದ್ದಾರಗೊಳಿಸುವವರೊಡನೆ ಬೆರೆಯುವಂತೆ ಮಾಡು.  ಅಲ್ಲದೆ ಯಾರು ನಿನ್ನ ಪವಿತ್ರ ದ್ವಾರದ ಹೊಸ್ತಿಲನ್ನು ತವಕದಿಂದ ಮುಟ್ಟಿ ಸೇವೆ ಮಾಡಲು ಸಿದ್ಧರಿರುವರೋ, ಅಂಥವರೊಡನೆ ಮಿಲನವಾಗಲೂ ಅವಕಾಶವನ್ನು ಕಲ್ಪಿಸು.  ನಿನ್ನ ಆನಂದಕ್ಕಾಗಿ ಸೇವೆ ಸಲ್ಲಿಸಲು ನಿರ್ಧರಿಸಿರುವ ಹೆಣ್ಣಾಳುಗಳಲ್ಲಿ ನಾನೊಬ್ಬನಾಗಲು ಅವಕಾಶ ನೀಡು. ನಿಜಕ್ಕೂ ನೀನು ಘನವಂತ ಔದಾರ್ಯದ ಖನಿ.

-`Abdu'l-Bahá
-----------------------

ಆಧ್ಯಾತ್ಮಿಕ ಬೆಳವಣಿಗೆಗಾಗಿ (#9487)

ಪ್ರಭುವೇ, ಓ ನನ್ನ ಪ್ರಭುವೇ, ನಿನ್ನ ಪ್ರೇಮದಿಂದ ಹೊತ್ತಿಸಿದ ಜ್ಯೋತಿ, ನಿನ್ನ ದಯೆಯೆಂಬ ಮರದಲ್ಲಿ ಎದ್ದ ಉರಿಯಿಂದ ದೇದೀಪ್ಯಮಾನವಾಗಿ ಪ್ರಜ್ವಲಿಸಿದೆ.  ಓ ಪ್ರಭುವೇ, ನಿನ್ನ ಸಿನಾಯ್ ಘೋಷಣೆಯಿಂದ ಹೊತ್ತಿದ ಬೆಂಕಿಯ ಜ್ವಾಲೆ ಹಾಗೂ ಶಾಖವು ಅಧಿಕಗೊಳ್ಳಲಿ.  ಸತ್ಯವಾಗಿ ನೀನು ದೃಢೀಕರಿಸ ತಕ್ಕವ, ಸಹಾಯಕ, ಸುಶಕ್ತ, ಉದಾರಿ ಮತ್ತು ಪ್ರೀತಿಗೆ ಅರ್ಹ.

-`Abdu'l-Bahá
-----------------------

